ಚಟರ್ಜಿ, ಜೋಗೇಶ ಚಂದ್ರ

 	1895-1969. ಬಂಗಾಲದ ಒಬ್ಬ ಪ್ರಖ್ಯಾತ ಕ್ರಾಂತಿಕಾರಿ ನಾಯಕ. ಢಾಕಾ ಜಿಲ್ಲೆಯ ಗಾವೊಡಿಯ ಎಂಬ ಹಳ್ಳಿಯಲ್ಲಿ ಜನನ. ತಂದೆ ಬಿಪಿನ್ ಚಂದ್ರ ಚಟರ್ಜಿ ದೌಲತ್ ಖಾನ್‍ನಲ್ಲಿ ವರ್ತಕರಾಗಿದ್ದರು. ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಹನ್ನೆರಡನೆಯ ವರ್ಷಕ್ಕೆ ಅವರು ದೌಲತ್ ಖಾನ್ ಸೇರಿ ಅಲ್ಲಿ ಎರಡು ವರ್ಷ ಓದಿದ ಮೇಲೆ ಕೊಮಿಲಾದಲ್ಲಿ ವಕೀಲರಾಗಿದ್ದ ತಮ್ಮ ಚಿಕ್ಕಪ್ಪ ವಿಶ್ವೇಶ್ವರ ಚಟರ್ಜಿಯವರ ಆಶ್ರಯದಲ್ಲಿ ಪ್ರೌಢ ಶಿಕ್ಷಣ ಮುಂದುವರಿಸಿದರು. ಅಲ್ಲಿ ಇವರಿಗೆ ಅನುಶೀಲನ ಸಮಿತಿಯ ಕ್ರಾಂತಿವೀರ ಬಿರೇನ್ ಚಟರ್ಜಿಯ ಸ್ನೇಹವಾಯಿತು. ಕ್ರಮೇಣ ಇವರು ಕ್ರಾಂತಿಕಾರಿ ಚಳವಳಿಯಲ್ಲಿ ಸಂಪೂರ್ಣವಾಗಿ ಮಗ್ನರಾದರು. ಇವರ ಕ್ರಾಂತಿಕಾರಿ ಚಟುವಟಿಕೆಗಳನ್ನು ಗಮನಿಸಿದ ಪೋಲೀಸರು ಚಟರ್ಜಿಯವರನ್ನು ದಸ್ತಗಿರಿ ಮಾಡಲು ಪ್ರಯತ್ನಿಸಿದಾಗ ಕೊಮಿಲಾದಿಂದ ತಪ್ಪಿಸಿಕೊಂಡು ಕಲ್ಕತ್ತೆಗೆ ಬಂದರು. ಅತ್ಯಂತ ಪ್ರಯಾಸದಿಂದ ಇವರನ್ನು ದಸ್ತಗಿರಿ ಮಾಡಿ, ಚಿತ್ರಹಿಂಸೆಗೊಳಪಡಿಸಿ, ಮೊದಲು ಪ್ರೆಸಿಡೆನ್ಸಿ ಕಾರಾಗೃಹದಲ್ಲೂ ಅನಂತರ ರಾಜಶಾಹಿ ಜೈಲಿನಲ್ಲೂ ಬಂಧನದಲ್ಲಿಡಲಾಯಿತು. 1920ರಲ್ಲಿ ಬಂಧನದಿಂದ ಬಿಡುಗಡೆಯಾದ ಚಟರ್ಜಿಯವರು ಪುನಃ ರಾಜಕೀಯ ಚಟುವಟಿಕೆಗಳಲ್ಲಿ ನಿರತರಾದರಲ್ಲದೆ ಅನುಶೀಲನ ಸಮಿತಿಯ ಕ್ರಾಂತಿಕಾರಿ ಚಟುವಟಿಕೆಗಳನ್ನು ಸಂಯುಕ್ತ ಪ್ರಾಂತ್ಯಕ್ಕೂ ಉತ್ತರ ಭಾರತದ ಇತರ ಭಾಗಗಳಿಗೂ ವಿಸ್ತರಿಸಲು ಯತ್ನಿಸಿ, ಕಾಶಿ ಮತ್ತು ಕಾನ್ಪುರಗಳನ್ನು ತಮ್ಮ ಕಾರ್ಯಚರಣೆಯ ಕೇಂದ್ರಗಳನ್ನಾಗಿ ಮಾಡಿಕೊಂಡು ಕಾರ್ಯೋನ್ನುಖರಾದರು. ಶಚೀಂದ್ರನಾಥ ಸನ್ಯಾಲ್, ಶಚೀನ್ ಬಕ್ಷಿ. ಭಗತ್ ಸಿಂಗ್ ಮುಂತಾದ ಕ್ರಾಂತಿಕಾರಿ ವೀರನಾಯಕರ ಸಂಪರ್ಕ ಬೆಳೆಸಿದರು. 1925ರಲ್ಲಿ ಜೋಗೇಶ ಚಂದ್ರ ಚಟರ್ಜಿಯವರು ಬಂಗಾಳಕ್ಕೆ ಭೇಟಿಯಿತ್ತಿದ್ದಾಗ ಕಲ್ಕತ್ತದಲ್ಲಿ ಇವರು ಬಂಧನಕ್ಕೊಳಗಾದರು. ಕಕೋರಿ ಪಿತೂರಿಯ ಆರೋಪಿಯಾಗಿ ಇವರನ್ನು ವಿಚಾರಣೆಗೆ ಗುರಿಪಡಿಸಲಾಯಿತು. ಆಜೀವ ಗಡಿಪಾರು ಶಿಕ್ಷೆಗೆ ಒಳಗಾದ ಇವರನ್ನು ಫತೇಗಢ ಕೇಂದ್ರ ಕಾರಗೃಹದಲ್ಲೂ ಆನಂತರ ಆಗ್ರ ಕೇಂದ್ರ ಕಾರಾಗೃಹದಲ್ಲೂ ಇಡಲಾಯಿತು. ಆಗ್ರ ಕಾರಾಗೃಹದಿಂದ ಇವರನ್ನು ಬಿಡಿಸಿಕೊಳ್ಳಲು ಇತರ ಕ್ರಾಂತಿಕಾರಿಗಳು ನಡೆಸಿದ ಪ್ರಯತ್ನ ಫಲಿಸಲಿಲ್ಲ. ಇವರನ್ನು ಅಲ್ಲಿಂದ ಲಖನೌ ಜೈಲಿಗೆ ವರ್ಗಾಯಿಸಿ ಮತ್ತೆ ಆಗ್ರ ಜೈಲಿಗೆ ಕರೆತರಲಾಯಿತು. ಅಲ್ಲಿ ಇವರು ಉಪವಾಸ ಸತ್ಯಾಗ್ರಹ ಮಾಡಿದರು.
1937ರಲ್ಲಿ ಸಂಯುಕ್ತ ಪ್ರಾಂತ್ಯದಲ್ಲಿ ಕಾಂಗ್ರೆಸ್ ಮಂತ್ರಿಮಂಡಲ ಸ್ಥಾಪಿತವಾದಾಗ ಎಲ್ಲ ರಾಜಕೀಯ ಬಂದಿಗಳನ್ನು ಬಿಡುಗಡೆ ಮಾಡಲಾಯಿತು. ಜೋಗೇಶ್ ಚಂದ್ರ ಚಟರ್ಜಿಯವರೂ ಬಿಡುಗಡೆ ಹೊಂದಿದರು. 1940ರಲ್ಲಿ ಅನುಶೀಲನ ಪಕ್ಷದವರು ಕ್ರಾಂತಿಕಾರಿ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ಕೆಲವು ವರ್ಷಗಳ ಕಾಲ ಚಟರ್ಜಿ ಅದರ ಕಾರ್ಯದರ್ಶಿಯಾಗಿ ಕೆಲಸಮಾಡಿ ಆನಂತರ ಆ ಪಕ್ಷವನ್ನು ಬಿಟ್ಟರು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಇವರು ಪುನಃ ದಸ್ತಗಿರಿಯಾದರು. ದೇವೋಲಿ ಸ್ಥಾನಬದ್ಧತಾ ಶಿಬಿರದಲ್ಲಿ ಇವರನ್ನು ಇಡಲಾಯಿತು. ಅಲ್ಲೂ ಇವರು ಉಪವಾಸ ಮುಷ್ಕರ ಹೂಡಿದರು. 1941ರ ನವೆಂಬರ್ 7ರಂದು ಯಾವ ಷರತ್ತೂ ಇಲ್ಲದೆ ಬಿಡುಗಡೆ ಹೊಂದಿದರು. ಆದರೆ 1942ರಲ್ಲಿ ಭಾರತ ಬಿಟ್ಟು ತೊಲಗಿ ಚಳವಳಿ ಪ್ರಾರಂಭವಾದಾಗ ಪುನಃ ದಸ್ತಗಿರಿಯಾದರು. ಇವರು 22 ದಿನಗಳ ಉಪವಾಸ ಮುಷ್ಕರ ನಡೆಸಿದ ಮೇಲೆ ಬಿಡುಗಡೆ ಹೊಂದಿದರು. ಜೋಗೇಶ ಚಂದ್ರ ಚಟರ್ಜಿ ಸುಮಾರು 24 ವರ್ಷಗಳ ಕಾಲ ವಿವಿಧ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದರು. 1956ರಲ್ಲಿ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಚುನಾಯಿತರಾದರು. ಇವರು 1969ರಲ್ಲಿ ಏಪ್ರಿಲ್ 22ರಂದು ನಿಧನ ಹೊಂದಿದರು.  		    (ಎಂ.ಕೆ. ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ